ನವದೆಹಲಿ: ಮುಂಬೈನ ಪಬ್ನಲ್ಲಿ ಅಗ್ನಿ ಅನಾಹುತ ಸಂಭವಿಸಿ 14 ಜನರು ಸಾವನ್ನಪ್ಪಿದ್ದ ದುರ್ಘಟನೆ ಮಾಸುವ ಮುನ್ನವೇ, ರಾಷ್ಟ್ರರಾಜಧಾನಿಯಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅನಾಹುತ ಸಂಭವಿಸಿ 17 ಮಂದಿ ಸಜೀವ ದಹನವಾಗಿದ್ದಾರೆ.
ಬವಾನಾ ಔದ್ಯಮಿಕ ಪ್ರದೇಶದಲ್ಲಿ ಈ ಪಟಾಕಿ ಕಾರ್ಖಾನೆ ಇದ್ದು, ಶನಿವಾರ ಸಂಜೆ ಅಗ್ನಿ ಅನಾಹುತ ಸಂಭವಿಸಿದೆ. ಕಾರ್ಖಾನೆಯಲ್ಲಿ ಅಕ್ರಮದ ನಿರ್ಮಿತಿಗಳಿದ್ದವು. ಇದರಿಂದಾಗಿ ಸಿಲುಕಿಹಾಕಿಕೊಂಡವರು ತಪ್ಪಿಸಿಕೊಳ್ಳಲಾಗಲಿಲ್ಲ. ಅಲ್ಲದೆ ಕೆಲವರು ಕಿಟಕಿಯಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಸಾವನ್ನಪ್ಪಿದ್ದಾರೆ ಎಂದು ಅಗ್ನಿ ಶಾಮಕ ದಳದ ಮೂಲಗಳು ತಿಳಿಸಿವೆ.
ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಈಗಾಗಲೇ ಒಂಬತ್ತು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಹಲವರು ಕಟ್ಟಡದೊಳಗೆ ಸಿಲುಕಿದ್ದಾರೆ ಎಂದು ಊಹಿಸಲಾಗಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಭೀತಿ ಇದೆ.