Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

“ಆರೋಗ್ಯ: ಸರಕಾರಿ-ಖಾಸಗಿ ಸಹಭಾಗಿತ್ವಕ್ಕೆ ಒತ್ತು’

ಉಡುಪಿ: ರಾಷ್ಟ್ರದ ಜನರ ಆರೋಗ್ಯ ಸಂರಕ್ಷಣೆಯನ್ನು ಉದ್ದೇಶವಾಗಿಟ್ಟುಕೊಂಡು ಸದೃಢ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಎಲ್ಲ ವೈದ್ಯ ಪದ್ಧತಿಯಲ್ಲೂ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವಕ್ಕೆ ಒತ್ತು ನೀಡಲಾಗಿದೆ ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡ ಹೇಳಿದರು.

ಅವರು ಗುರುವಾರ ಬೆಳಗ್ಗೆ ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯ ವಾಜಪೇಯಿ ಸಭಾಭವನದಲ್ಲಿ ಜರಗಿದ ಜಿಲ್ಲಾಡಳಿತ, ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿ.ಆರ್‌.ಎಸ್‌. ಸ್ವಾಸ್ಥ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು ಅವರ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಮರ್ಪಣಾ ಸಮಾರಂಭವನ್ನು ದೀಪ ಬೆಳಗಿಸಿ ಮಾತನಾಡಿದರು.

ಸಾಮಾನ್ಯರಿಗೆ ಉತ್ತಮ ಆರೋಗ್ಯ
ತಾಯಿ – ಮಕ್ಕಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ತಾಯಿ ಮರಣ ಮತ್ತು ಹಸುಗೂಸು ಮರಣ ಪ್ರಮಾಣದಲ್ಲಿ ಗಮನೀಯ ಪ್ರಮಾಣದ ಇಳಿಕೆಯನ್ನು ದಾಖಲಿಸಲಾಗಿದೆ. ಎಲ್ಲರಿಗೂ ಆರೋಗ್ಯ ಪರಿಕಲ್ಪನೆಗೆ ಆದ್ಯತೆ ನೀಡಲಾಗಿದ್ದು, ಇದರಿಂದಾಗಿ ಬಹಳಷ್ಟು ಉತ್ತಮ ಫ‌ಲಿತಾಂಶ ದಾಖಲಾಗಿದೆ. ಇದೇ ಮಾದರಿ ಉಡುಪಿಯಲ್ಲೂ ಕೈಗೂಡಿದ್ದು ತಾಯಿ ಮಕ್ಕಳ ಆಸ್ಪತ್ರೆಯಿಂದ ಸಾಮಾನ್ಯರಿಗೆ ಉತ್ತಮ ಆರೋಗ್ಯ ದೊರೆಯುವಂತಾಗಲಿ. ರಾಜ್ಯಕ್ಕೆ ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆಗೆ ಪೂರಕವಾಗಿ ಕ್ರಿಯಾ ಯೋಜನೆ ಅನುಷ್ಠಾನ ವರದಿ ನೀಡಿದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಇನ್ನಷ್ಟು ಅನುದಾನ ನೀಡಲಾಗುವುದು ಎಂದರು.

ಬಡ ಜನರಿಗೆ ಉಚಿತ ಚಿಕಿತ್ಸಾ ಸೌಲಭ್ಯ
ಉಡುಪಿ ಶ್ರೀ ಪೇಜಾವರ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಆಶೀರ್ವಚನಗೈದು ಆಸ್ಪತ್ರೆಯಲ್ಲಿ ಸಾಮಾನ್ಯ ಹಾಗೂ ಬಡ ಜನರಿಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ದೊರೆಯುವ ಭಾಗ್ಯ ಮೂಡಿ ಬರಲಿ. ಆಸ್ಪತ್ರೆಯಲ್ಲಿ ಬಡವರಿಗೆ ಹಿಂದಿನದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೌಕರ್ಯಯುತ ಸೇವೆ ದೊರೆಯಲಿ ಈ ಮಾನವೀಯ ದೃಷ್ಟಿ ಬೆಳೆಸಿಕೊಂಡ ಡಾ| ಬಿ.ಆರ್‌. ಶೆಟ್ಟಿ ಆವರ ಕಾರ್ಯ ಶ್ಲಾಘನೀಯವಾದದ್ದು ಎಂದರು. ಮುಖ್ಯ ಅತಿಥಿಯಾಗಿದ್ದ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ಅತ್ಯಾಧುನಿಕ ಸೌಕರ್ಯಗಳಿಂದ ಕೂಡಿರುವ ಆಸ್ಪತ್ರೆ ಒಟ್ಟು 200 ಬೆಡ್‌ಗಳನ್ನು ಹೊಂದಿದ್ದು, ಬಡವರಿಗೆ ಉಚಿತವಾಗಿ ಚಿಕಿತ್ಸೆ ಹಾಗೂ ಪಂಚತಾರಾ ಮಟ್ಟದಲ್ಲಿ ಸೇವೆಗಳನ್ನು ನೀಡಲಿ ಎಂದರು.

ಬಿ.ಆರ್‌.ಎಸ್‌. ಸ್ವಾಸ್ಥ್ಯ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು ಇದರ ಅಧ್ಯಕ್ಷ ಡಾ| ಬಿ.ಆರ್‌. ಶೆಟ್ಟಿ ಪ್ರಸ್ತಾವನೆಗೈದರು.
ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಬಿ.ಆರ್‌.ಎಸ್‌. ಸಂಸ್ಥೆಯ ಉಪಾಧ್ಯಕ್ಷೆ ಡಾ| ಸಿ.ಆರ್‌. ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಲಕ್ಷ್ಮಣ ನಿಂಬರ್ಗಿ ಉಪಸ್ಥಿತರಿದ್ದರು.  ಕುಶಲ ಶೆಟ್ಟಿ ಸ್ವಾಗತಿಸಿದರು. ವಿನ್ಸೆಂಟ್‌ ಆಳ್ವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕೇಂದ್ರ ಸರಕಾರದ ‘ಅಮೃತ್‌ ದೀನ್‌ ದಯಾಳ್‌’ ಯೋಜನೆಯಿಂದಾಗಿ ಜನರಿಗೆ ಬ್ರ್ಯಾಂಡೆಡ್‌ ಔಷಧ ಈಗಿರುವುದಕ್ಕಿಂತ ಅರ್ಧ ದರಕ್ಕೆ ಲಭ್ಯವಾಗಿದೆ. ಎಲ್ಲರ ಸಹಯೋಗದಿಂದ ಎಲ್ಲರಿಗೂ ಆರೋಗ್ಯ ಎಂಬುದು ಇಲಾಖೆಯ ಧ್ಯೇಯವಾಗಿದ್ದು, ದೇಶದ ಜನರ ಆರೋಗ್ಯ ಸಂವರ್ಧನೆಗೆ ಕೇಂದ್ರ ಸರಕಾರ ಒತ್ತು ನೀಡಿದೆ. ಬಡವರಿಗೆ ಉಚಿತವಾಗಿ ಹಾಗೂ ಮೌಲ್ಯಯುತವಾದ ಸೇವೆಗಳನ್ನು ನೀಡುವುದು ಬಹಳ ಮುಖ್ಯವಾಗಿದೆ. 
ಜೆ.ಪಿ. ನಡ್ಡ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

Read more at https://www.udayavani.com/kannada/news/udupi-news-coastal/265929/health-emphasizing-government-private-partnership#5Z4DDHutvsBpBsXK.99

No Comments

Leave A Comment